ರಾಘವೇಂದ್ರ ಪಾಟೀಲ ಕೂಡಾ ನಮ್ಮಲ್ಲಿ ಸಾಮಾನ್ಯವಾಗಿ ಆಗುವಂತೆ ಒಬ್ಬ ಸಾಹಿತ್ಯಕ ಗೆಳೆಯೆನಾಗಿಯೇ ನನ್ನನ್ನು ಸಮೀಪಿಸಿದ್ದು. ನಾನು ಅವರನ್ನು ನೋಡಿದ ಹೊಸದರಲ್ಲಿ ಅವರು ಕವಿತೆಗಳನ್ನು ಬರೆಯುತ್ತಿದ್ದರು. ಅಮೇಲೆ ಇದ್ದಕ್ಕಿದ್ದಂತೆ ಒಂದು ದಿನ ತಾವು ಹೊಸದಾಗಿ ಬರೆದ ಒಂದು ಗದ್ಯದ ತುಣುಕು ಹಿಡಿದುಕೊಂಡು ಬಂದರು. ಅದನ್ನು ಓದಿದ ಕೂಡಲೇ ನನಗೆ ಅನ್ನಿಸಿತು. ಇಲ್ಲೊಂದು ಗಟ್ಟಿಯಾದ ಕಥಾಪಿಂಡವಿದೆ ಅಂತ. ಪಾಟೀಲರೇ ನೀವು ಗದ್ಯ ಬರೀಬೇಕು ಎಂದೆ. ಯಾವ ಅಸ್ತು ದೇವತೆ ಆವಾಗ ಹೌದ್ ಹೌದು ಎಂದು ಗೋಣು ಆಡಿಸಿತೋ ಕಾಣೆ. ಆವತ್ತಿಂದ ಪಾಟೀಲ ಗಟ್ಟಿಯಾಗಿ ಗದ್ಯವನ್ನು ಹಿಡಿದುಕೊಂಡರು. ಅವರ ಗದ್ಯ ಅಂದರೆ ಕಪ್ಪುನೆಲವನ್ನು ನೇಗಿಲು ಊರಿ ಉಳುವ ಕೃಷಿಕರ್ಮವಾಗಿತ್ತು. ಕಬ್ಬಿಣದಂಥ ನೆಲ ಅವರ ಒತ್ತು ನೇಗಿಲ ಉಳುಮೆಗೆ ತುರಿ ತುರಿಯಾಗಿ ತಿರುವಿಕೊಳ್ಳುತ್ತಾ ನೆಲದೊಳಗಿನ ಕಂಪು ಘಮ್ಮೆನ್ನತೊಡಗಿತು. ಬಿತ್ತನೆಗೆ ದೇಸೀ ಬೀಜಗಳನ್ನೇ ಬಳಸಿ ಪಾಟೀಲ ತಮ್ಮ ನೇಗಿಲ ಕಾಯೆಕ ಮುಂದುವರೆಸಿದರು. ಫಸಲು ಸಮೃದ್ಧ ಎನ್ನುವಂತಿಲ್ಲ. ಆದರೆ ದಕ್ಕಿದ್ದು ಗಟ್ಟಿಕಾಳು. ಈ ನೆಲದ ಕಸುವಲ್ಲಿ ಮಾಗಿದ್ದಾದುದರಿಂದ ಅದಕ್ಕೆ ಫರಂಗೀ ರೋಗದ ಕಾಟವಿದ್ದಿಲ್ಲ. ಬೆಳ್ಳಗೆ ಮುತ್ತಿನಂತೆ ಬೆಳಕು ಹಿಡಿದುಕೊಂಡ ಗಟ್ಟಿಬಿಳಿಜೋಳದ ಫಸಲದು. ಈ ನೆಲದಲ್ಲಿ ಇಂಗಿದ ಎಂಥ ನೋವನ್ನೂ ಅಂತಸ್ಥಮಾಡಿಕೊಳ್ಳುವ ಧಾರಣಶಕ್ತಿ ಪಾಟೀಲರ ಬೊಗಸೆಧಾನ್ಯಕ್ಕಿತ್ತು. ಆ ಧವಸದಲ್ಲಿ ಈ ನೆಲದ ಹಸಿವಿನ ಪ್ರಾರ್ಥನೆಯಿತ್ತು. ತಿನ್ನತಕ್ಕ, ಅನ್ನವನ್ನ ಮಾತ್ರ ಪಾಟೀಲ ತಮ್ಮ ಕಥನ ಕೃಷಿಯೆಲ್ಲಿ ಬೆಳೆದರು.
ಹಣದ ಬೆಳೆಯನ್ನು ಯಾವತ್ತೂ ಅವರು ತಮ್ಮ ಬೆದ್ದಲಲ್ಲಿ ಕಾಲೂರಲಿಕ್ಕೆ ಬಿಡಲಿಲ್ಲ. ಮಣ್ಣಿಂದ, ತಿನ್ನುವ ಅನ್ನವನ್ನು ಮಾತ್ರ ಬೆಳೆಯಬೇಕು ಅನ್ನುವುದು ಅವರ ಸಾಹಿತ್ಯಸಿದ್ಧಾಂತವಾಗಿತ್ತು. ಶೀಘ್ರಸಮೃದ್ಧಿ, ವರ್ಷಕ್ಕೆ ಮೂರು ಬೆಳೆ ತೆಗೆಯೆವ ಹಪಾಹಪಿ, ಬೆಲೆ ಕುಸಿತದ ಹತಾಶೆ-ಇವು ಯಾವುವೂ ಅವರ ಮನಸ್ಸಿಗೆ ಹತ್ತಲಿಲ್ಲ. ಬಡವರ ಮನೆಯೆ ನಿತ್ಯ ಗಂಜಿ ಪಾಟೀಲರ ಕೃಷೀಕರ್ಮದ ಧ್ಯಾನವಾಗಿತ್ತು. ಪಾಟೀಲ ಕವಿತೆ ಬರೆಯುವುದ ಬಿಟ್ಟರು. ಆದರೆ ಕವಿತೆ ಬರೆದಂತೇ ಕಥೆ ಬರೆಯ ತೊಡಗಿದರು. ಅವರ ಗದ್ಯವೆಂದರೆ ಸಾಲು ಸಾಲುಗಳ ನಿರ್ಮಾಣ. ಸಾಲು ಎಷ್ಟು ಬೇಕೋ ಅಷ್ಟು ಆಳ ಭೇದಿಸಿಲ್ಲವೆಂದರೆ ಮತ್ತೊಮ್ಮೆ ಅವರು ನೇಗಿಲು ಹೊಡೆದಾರು. ಹತ್ತು ಸಾಲಲ್ಲಿ ಒಂದು ಸಾಲು ಕೆಟ್ಟರೆ ಯಾರ ಗಮನಕ್ಕೂ ಬರಲಾರದೆಂದು ಮುಂದಿನ ಸಾಲಿಗೆ ಯಾವತ್ತೂ ಅವರು ನುಗ್ಗಲಾರರು. ಕೆಲವೊಮ್ಮೆ ಅವರು ತಮ್ಮ ಕಾರ್ಯೆಕ್ಷೇತ್ರವಾದ ಮಲ್ಲಾಡಿಹಳ್ಳಿಯಿಂದ ನನಗೆ ಫೋನು ಮಾಡುತ್ತಾರೆ. ಒಂದು ಕಥೆ ಶುರುಮಾಡಿದೀನಿ ಸರ್ರು...ಅದನ್ನ ನಿಮಗೆ ಓದಬೇಕಲ್ಲ....! ಹಿಡಕೊಂಡು ಬನ್ನಿ ಮತ್ತೆ ಅನ್ನುತ್ತೇನೆ ನಾನು. ಮುಂದಿನ ಭಾನುವಾರ ಮಲ್ಲಾಡಿಹಳ್ಳಿಯಿಂದ ತಾಳ್ಯರ ಸಮೇತ ಪಾಟೀಲರ ಸವಾರಿ ಬೆಂಗಳೂರಿಗೆ ಚಿತ್ತೈಸುತ್ತೆ. ಯಾವುದಾದರೂ ಮರದ ಹರುಕುನೆರಳಲ್ಲಿ ಪಾಟೀಲ ಕಥೆ ಓದಲಿಕ್ಕೆ ಶುರುಹಚ್ಚುತ್ತಾರೆ. ತಮ್ಮ ನೋಟ್ ಬುಕ್ಕಿಂದ ಎರಡು ಪುಟ ಓದಿ, ಹೆಂಗೆ ಬಂದಿದೆ ಸರ್? ಅನ್ನುತ್ತಾರೆ. ಮುಂದೆ ಓದಿ ಅನ್ನುತ್ತೇನೆ. ಪಾಟೀಲ ಯಥಾಪ್ರಕಾರ ನಿಶ್ಶಬ್ದವಾಗಿ ನಕ್ಕು ಇಷ್ಟೇ ಸರ್ ಬರ್ದಿರೋದು....! ಇಷ್ಟು ಓದೋದಕ್ಕೆ ಮಲ್ಲಾಡಿಹಳ್ಳಿಯಿಂದ ಬೆಂಗಳೂರಿಗೆ ಐದು ಗಂಟೆ ಪ್ರಯಾಣ ಮಾಡಿಕೊಂಡು ಬಂದಿರಾ? ಎಂದು ನಾನು ರೇಗುತ್ತೇನೆ. ಇಲ್ಲ ಸರ್...ಬೇಗ ಮುಗಿಸ್ತೀನ್ರಿ...!ಎಂಬುದು ಪಾಟೀಲರ ಆಶ್ವಾಸನೆ. ಮತ್ತೆ ಪಾಟೀಲರ ದರ್ಶನ ಮುಂದಿನ ವರ್ಷ...ಮತ್ತೆ ಎರದೂವರೆ ಪುಟಗಳೊಂದಿಗೆ. ಹೀಗೆ ಈ ಮಾರಾಯ ವರ್ಷಗಟ್ಟಲೆ ಒಂದು ಕಥೆ ಬರೆಯೋದು! ನಾವು ಕವಿತೆ ಬರೆಯೋ ಕ್ರಮಕ್ಕಿಂತ ಎಷ್ಟು ಮಾತ್ರಕ್ಕೂ ಭಿನ್ನವಲ್ಲ ಇದು! ಅದಕ್ಕೇ ನಾನು ಪಾಟೀಲ ಕಥೆಯ ಹೆಸರಲ್ಲಿ ಕವಿತೆ ಬರೆಯುತ್ತಾ ತಮ್ಮ ಪ್ರಪ್ರಾಚೀನ ಅತೃಪ್ತಿಯ ಪರ್ಲುಹರಿಯುತ್ತಿದ್ದಾರೆ ಅನ್ನುವುದು. ಅದಕ್ಕೇ ಪಾಟೀಲರದು ಮಾರ್ಗಶೈಲಿಯೆ ದೇಸಿ ಅನ್ನುವುದು! ಅವರಿಗೆ ಧಾವಂತವೇ ಇಲ್ಲ. ಮುಸುಕಿನ ಧ್ಯಾನದ ಮತ್ತೊಬ್ಬ ಜಡಭರತ ಇವರು. ಅವರ ಪ್ರತಿಭೆ ನಿದ್ದೆಯ ಮುಸುಕಲ್ಲಿ ಸದಾ ಅರ್ಥಕ್ಕೆ ಮುಲುಕುವ ಮುಚ್ಚಿದ ಮುಷ್ಠಿಯ ಮಗು.
ಈಗ ಪಾಟೀಲ ಕಥೆಗಾರನಾಗಿ ನಾಡಿಗೆ ಎಷ್ಟು ಮುಖ್ಯರೋ ಅದಕ್ಕಿಂತ ಹಚ್ಚಿಕೊಂಡ ತಮ್ಮನಾಗಿ ನನಗೆ ಮುಖ್ಯರು. ನನ್ನ ಅಂತರಂಗದ ನೋವು ನಲಿವಲ್ಲಿ ಬೆರೆತುಹೋದವರು. ಕಥೆ ಕವಿತೆ ಎಂದು ಒಂದು ತೃಣ ಮಾತಾಡದೆ ವಾರಗಟ್ಟಲೆ ನಾವು ಆರಾಮಾಗಿ ಇರಬಲ್ಲೆವು. ಅವರಷ್ಟೇ ಅಥವಾ ಅವರಿಗಿಂತ ಒಂದು ಗುಲಗಂಜಿ ಹೆಚ್ಚು ಮುಗ್ಧರೆನ್ನಬಹುದಾದ ಅವರ ಪತ್ನಿ ಜಯಶ್ರೀ ಮಾಡುವ ಬಿಸಿಬಿಸಿ ಜೋಳದ ರೊಟ್ಟಿ, ಎಣ್ಣೆಗಾಯಿ ಉಣ್ಣುತ್ತಾ , ಅದರ ಬನಿ, ಘಮ, ಖಾರಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಾ ನಾವು ಸುಖಾ ಸುಮ್ಮನೆ ಸುಖವಾಗಿರಬಲ್ಲೆವು. ನಮ್ಮ ಸ್ನೇಹ ಸಾಹಿತ್ಯದ ಹಂಗಿಲ್ಲದ ಸ್ನೇಹ ಅನ್ನುವುದೇ ಅದರ ಖಾಸಗಿ ಖದರು. ಈ ಸ್ನೇಹ ಪಾಟೀಲರ ಎಪ್ಪತ್ತೈದರಲ್ಲೂ ಹೀಗೇ ಉಳಿದು-ಇರಲಿ.